|
"ದೇವರಿಗಾಗಿ ಬದುಕುವವನ ಬಾಳು ಸಂಭ್ರಮಭರಿತವಾದುದು" ಎಂದು ಸತ್ಯವೇದವು ತಿಳಿಸುತ್ತದೆ (ಜ್ಞಾನೋಕ್ತಿಗಳು 14:14 Living Bible ಭಾಷಾಂತರ).
ನನ್ನ ಸಾಕ್ಷಿಯನ್ನು ನಾನು ನಿಮಗೆ ನೀಡಬಯಸುತ್ತೇನೆ. ಈಗ ನನ್ನ ವಯಸ್ಸು 72 ವರ್ಷಗಳು (ನವಂಬರ 2011) ಹಾಗೂ ನಾನು ನೂತನಸೃಷ್ಟಿಯನ್ನು ಹೊಂದಿ ದೇವರ ಮಗುವಾಗಿ ಹುಟ್ಟಿ 52 ವರ್ಷಗಳಿಗಿಂತಲೂ ಹೆಚ್ಚಾಗಿ ಬಾಳಿರುವೆನು. ನನ್ನ ಕ್ರಿಸ್ತೀಯ ಜೀವನವು ಸಡಗರದ್ದಾಗಿದೆ ಎನ್ನುವದು ನನ್ನ ಪ್ರಾಮಾಣಿಕ ಸಾಕ್ಷಿ. ಅನೇಕ ಶೋಧನೆಗಳ ಮೂಲಕ ನಾನು ಸಾಗಿ ಬಂದಿದ್ದೇನೆ, ಆದರೆ ಅವೆಲ್ಲವುಗಳಲ್ಲೂ ನಾನು ದೇವರ ಅದ್ಭುತವದ ಹಸ್ತವನ್ನು ಅನುಭವಿಸಿದ್ದೇನೆ. ಮತ್ತು ಇವೆಲ್ಲವುಗಳಿಗಿಂತಲೂ ಶ್ರೇಷ್ಠವಾದ ಜೀವನವು ನನ್ನ ಮುಂದಿದೆಯೆಂದು ನಾನು ನಂಬುತ್ತೇನೆ. ದೇವರಿಗಾಗಿ ಜೀವಿಸಿ ಅವರ ಸೇವೆ ಮಾಡುವುದು ನನಗೆ ಬಹಳ ಉತ್ಸಾಹ ನೀಡುತ್ತದೆ. ಅವರ ಸೇವೆಯನ್ನು ಮಾಡುವದು ಈ ಜಗತ್ತಿನಲ್ಲಿ ಯಾರೇ ಮಾಡಬಹುದಾದ ಎಲ್ಲಕ್ಕಿಂತ ಶ್ರೇಷ್ಠವಾದ ಕಾರ್ಯ.
ಇಡೀ ವಿಶ್ವದಲ್ಲಿ ಯಾರ ವಿರುದ್ಧವೂ ನನಗೆ ಯಾವುದೇ ದೂರುಗಳಿಲ್ಲ. ಇಂದಿನವರೆಗೂ ಯಾರೂ ನನಗೆ ಕೇಡು ಮಾಡುವುದರಲ್ಲಿ ಸಫಲವಾಗಿಲ್ಲ. ಅನೇಕರು ನನಗೆ ಹಾನಿ ಮಾಡಲು ಪ್ರಯತ್ನಿಸಿರುವರು ಮತ್ತು ಕೆಲವು ಸಹ ಕಾರ್ಯಕರ್ತರು ನನಗೆ ದ್ರೋಹ ಬಗೆದು ನನ್ನ ವಿರುದ್ಧವಾಗಿ ತಿರುಗಿಬಿದ್ದಿರುವರು. ಅನೇಕ "ಕ್ರೈಸ್ತರು" ಕ್ರೈಸ್ತ ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲದಲ್ಲಿ (internet) ನನ್ನ ಬಗ್ಗೆ ಸುಳ್ಳು ವರದಿಗಳನ್ನು ಹರಡಿಸಿರುವರು, ಮತ್ತು ಅವರಲ್ಲಿ ಕೆಲವರು ನನ್ನನ್ನು ನ್ಯಾಯಾಲಯಕ್ಕೂ ಕರೆದೊಯ್ದಿರುವರು. ಆದರೆ ಇವೆಲ್ಲವೂ ನನಗೆ "ಆತನ ಬಾಧೆಗಳಲ್ಲಿ ಪಾಲುಗಾರನಾಗಿ ಇರುವುದರ" ಒಂದು ಭಾಗಮಾತ್ರವೇ ಆಗಿವೆ; ಅದಲ್ಲದೆ ರೋಮಾ. 8:28 ರಲ್ಲಿ ಹೇಳಿರುವಂತೆ, ಯಾರೇನು ಮಾಡಿದ್ದರೂ ಅದರಿಂದ ನನಗೆ ಒಳಿತೇ ಆಗಿದೆ. ವಾಸ್ತವವಾಗಿ ಅವರೆಲ್ಲರಿಗಾಗಿ ನಾನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಏಕೆಂದರೆ ದೇವರು ಅವರ ಕುಯುಕ್ತಿಗಳ ಮೂಲಕ ನಾನು ವಿವೇಕಿಯಾಗುವಂತೆ - ನನ್ನ ಪ್ರತಿಕ್ರಿಯೆಗಳಲ್ಲಿ ಕ್ರಿಸ್ತನ ಸಾರೂಪ್ಯ ಕಾಣಿಸಿಕೊಳ್ಳುವಂತೆ - ನನ್ನನ್ನು ಬದಲಾಯಿಸಿದ್ದಾರೆ. ಅವರ ದುಷ್ಕೃತ್ಯಗಳಿಂದ ಉಂಟಾದ ಒಳ್ಳೆಯ ಪರಿಣಾಮ ಇದಾಗಿದೆ.
ಮೊಟ್ಟ ಮೊದಲಾಗಿ ನಾವು ಮುರಿಯಲ್ಪಟ್ಟವರಾಗಿದ್ದಲ್ಲಿ ಮಾತ್ರ, ನಂತರ ದೇವರಿಗೆ ನಾವು ಪ್ರಯೋಜನಕಾರಿಗಳು ಎನಿಸಬಹುದು. ಅನೇಕ ಜನರನ್ನೂ ಘಟನೆಗಳನ್ನೂ ದೇವರು ಬಳಸಿಕೊಂಡು ನಮ್ಮ ಅಹಂಭಾವವನ್ನು ಮತ್ತು ನಮ್ಮ ಸಾಮರ್ಥ್ಯದಲ್ಲಿ ನಮಗಿರುವ ಸ್ವ-ನಂಬಿಕೆಯನ್ನು ಮುರಿದು ನಮ್ಮ ದೃಷ್ಟಿಯಲ್ಲಿ ನಾವು ಕುಗ್ಗುವಂತೆ ಮಾಡುವರು.
ದೇವರು ಹಿಂದಿನ ದಿನಗಳಲ್ಲಿ ನನ್ನನ್ನು ಬಹಳವಾಗಿ ಮುರಿದರು ಮತ್ತು ಇನ್ನೂ ನನ್ನನ್ನು ಮುರಿಯುವುದನ್ನು ಅವರು ನಿಲ್ಲಿಸಿಲ್ಲ. ಫಲಕಾರಿಯಾಗುವ ವಿಧಾನವು ಇದಾಗಿದೆ. ನಾವು ಹೆಚ್ಚಾಗಿ ಮುರಿಯಲ್ಪಟ್ಟಷ್ಟೂ ಅಧಿಕವಾಗಿ ಇತರರನ್ನು ಆಶೀರ್ವದಿಸಲು ದೇವರು ನಮ್ಮನ್ನು ಬಳಸಬಲ್ಲರು. ವಿಮೋಚನಕಾಂಡ 17ರಲ್ಲಿ ನಾವು ಓದುವಂತೆ, ಬಂಡೆಯನ್ನು ಬಲವಾಗಿ ಹೊಡೆದಾಗ ಮಾತ್ರವೇ ನೀರು ಹೊರ ಚಿಮ್ಮಿತು. ಒಬ್ಬ ಸ್ತ್ರೀಯು ಯೇಸುವಿಗೆ ಬಹು ಬೆಲೆಯುಳ್ಳ ಸುಗಂಧ ತೈಲವನ್ನು ಹಚ್ಚಲು ಬಂದಾಗ (ಮಾರ್ಕನು 14:3), ತೈಲದ ಭರಣಿಯನ್ನು ಒಡೆದಾಗಲೇ ಅದರ ಪರಿಮಳವು ಮನೆಯಲ್ಲಿ ತುಂಬಿಕೊಂಡಿತು. ಐದುಸಾವಿರ ಜನರಿಗೆ ಊಟಮಾಡಿಸಲು, ಯೇಸುವು ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿದರು. ಆದರೆ ಜನರಿಗೆ ಊಟ ದೊರೆತದ್ದು ಆ ರೊಟ್ಟಿಯು ಮುರಿಯಲ್ಪಟ್ಟಾಗ ಮಾತ್ರವೇ. ಈ ದೃಷ್ಟಾಂತಗಳಲ್ಲಿ ಇರುವ ಸಂದೇಶವೇನು? ಮುರಿಯುವಿಕೆಯ ಮೂಲಕವೇ ಆಶೀರ್ವಾದವು ಉಂಟಾಗುವದು ಎಂಬುದೇ. ಪರಮಾಣುವು ವಿಚ್ಛೇದಿಸಲ್ಪಟ್ಟಾಗ, ಅದು ಉಂಟುಮಾಡುವ ವಿದ್ಯುತ್ ಶಕ್ತಿಯು ಒಂದು ಇಡೀ ನಗರಕ್ಕೆ ವಿದ್ಯುತ್ತನ್ನು ಪೂರೈಸಬಲ್ಲದು! ಒಂದು ಅಣುವು ಎಷ್ಟು ಕಿರಿದಾಗಿದೆಯೆಂದರೆ ಅದನ್ನು ನೀವು ಸೂಕ್ಷ್ಮದರ್ಶಕದ ಮೂಲಕವೂ ದೃಷ್ಟಿಸಲಾರಿರಿ. ಆದರೆ ಅದು ವಿಭಜಿಸಲ್ಪಟ್ಟಾಗ ಅದ್ಭುತವಾದ ಶಕ್ತಿಯು ಹೊರಹೊಮ್ಮುವುದು. ನಿಸರ್ಗದಲ್ಲೂ ವೇದವಾಕ್ಯದಲ್ಲೂ ಇರುವ ಸಂದೇಶ ಇದೇ: ದೇವರ ಪ್ರಭಾವವು ಹೊರಬರುವದು ಮುರಿಯುವಿಕೆಯ ಮೂಲಕವೇ. ಈ ಸಂದೇಶವು ನಿಮ್ಮನ್ನು ಈ ಹೊಸ ವರ್ಷದಲ್ಲಿ ಹುರಿದುಂಬಿಸಲಿ.
1963ನೇ ಇಸವಿಯಲ್ಲಿ ಮೊದಲಬಾರಿ ನನ್ನ ಬದುಕು ಹಾಗೂ ಸೇವೆಯಲ್ಲಿ ಬಲಕ್ಕಾಗಿ ನಾನು ದೇವರನ್ನು ಬೇಡಿದಾಗ ಅವರು ಅದೇ ಸಂದೇಶದಿಂದ ನನ್ನ ಹೃದಯವನ್ನು ಸೆಳೆದರು. ಆ ಹಂತದಲ್ಲೇ, ನೌಕಾಪಡೆಗೆ ನಾನು ರಾಜೀನಾಮೆಯನ್ನು ನೀಡುವ ಮುನ್ನವೇ, ಮುರಿಯುವಿಕೆಯ ಮಾರ್ಗವೇ ಶಕ್ತಿಯ/ಬಲದ ವಿಧಾನವೆಂದು ದೇವರು ನನಗೆ ತೋರಿದರು. ಜೀವನದುದ್ದಕ್ಕೂ ಈ ಅಂಶವನ್ನು ನಾನು ಅಸಡ್ಡೆ ಮಾಡದಿರ ಬಯಸುತ್ತೇನೆ. ನಾನು ವಿಶೇಷವಾಗಿ ಯುವ ಜನರನ್ನು ಅವರ ಯೌವನ ಪ್ರಾಯದಲ್ಲೇ ಈ ಪಾಠವನ್ನು ಕಲಿಯಲು ಪ್ರೋತ್ಸಾಹಿಸ ಬಯಸುವೆನು.
ದೇವರ ವಾಗ್ದಾನಗಳ ಮೇಲೆ ಜೀವವುಳ್ಳ ನಂಬಿಕೆಯನ್ನಿಡುವುದು ಎರಡನೆಯ ಆವಶ್ಯಕವಾಗಿದೆ.
ದೇವರು ಇಸ್ರಯೇಲ್ಯರ ಹಿರಿಯರಿಗೆ ಐಗುಪ್ತದೇಶದಲ್ಲಿ ಎರಡು ವಾಗ್ದಾನಗಳನ್ನು ಕೊಟ್ಟರು: "ನಾನು ನಿಮ್ಮನ್ನು (1) ಐಗುಪ್ತದೇಶದಿಂದ ಹೊರತರುವೆನು ಮತ್ತು (2) ಕಾನಾನ್‍ದೇಶಕ್ಕೆ ಬರಮಾಡುವೆನು" (ವಿಮೋಚನಕಾಂಡ 3:17). ನೋಡಿರಿ, ಅಲ್ಲಿ ಎರಡು ಆಶ್ವಾಸನೆಗಳಿದ್ದವು. ಆದರೆ ಮೊದಲನೆಯದು ಮಾತ್ರವೇ ನೆರವೇರಿಸಲ್ಪಟ್ಟಿತು. ಎರಡನೆಯದು ಈಡೇರಿಸಲ್ಪಡಲಿಲ್ಲ. ಆ ಹಿರಿಯರಲ್ಲಿ ಯಾರೊಬ್ಬರೂ ಕಾನಾನ್‍ದೇಶವನ್ನು ಪ್ರವೇಶಿಸಲಿಲ್ಲ - ಇದಕ್ಕೆ ಕಾರಣವೇನೆಂದರೆ ಅವರು ಕಾನಾನನ್ನು ಪ್ರವೇಶಿಸುವ ಸಮಯ ಬಂದಾಗ ನಂಬಿಕೆಯಿಂದ ನಡೆದುಕೊಳ್ಳಲಿಲ್ಲ (ಅರಣ್ಯಕಾಂಡ 13). ದೇವರ ವಾಗ್ದಾನಗಳಿಗೆ ನಾವು ನಂಬಿಕೆಯೊಡನೆ ಸ್ಪಂದಿಸದಿದ್ದಲ್ಲಿ ಅವು ನೆರವೇರಿಸಲ್ಪಡವು. ದೇವರ ವಾಗ್ದಾನ ಮತ್ತು ನಮ್ಮ ನಂಬಿಕೆ ಇವು ಎರಡು ವಿದ್ಯುತ್ ತಂತಿಗಳಂತೆ ಇರುವವು. ಅವು ಒಂದನ್ನೊಂದು ಸ್ಪರ್ಶಿಸಿದಾಗಲೇ (ವಿದ್ಯುತ್ತಿನ ಸ್ವಿಚ್ಚಿನೊಳಗಿನ ಹಾಗೆ) ತಂತಿಗಳ ಮೂಲಕ ವಿದ್ಯುತ್‍ಶಕ್ತಿಯು ಹರಿಯಲು ಶುರುವಾಗುತ್ತದೆ. ದೇವರ ವಾಗ್ದಾನದ ಬಗ್ಗೆ ಕೇಳಿ ಅದನ್ನು ನೀವು ತಿಳಿದಿರಬಹುದು. ಆದರೆ ನಂಬಿಕೆಯ ಮೂಲಕ ನೀವು ಕೈಚಾಚಿ, "ಹೌದು, ನನ್ನ ಜೀವನದಲ್ಲಿ ಇದು ನೆರವೇರುವುದೆಂದು ನಾನು ನಂಬುವೆನು," ಎಂದು ನುಡಿದಾಗಲೇ ಆ ಆಶ್ವಾಸನೆಯು ಕೈಗೂಡುವುದು. ಕಾನಾನ್‍ದೇಶದ ಅಂಚಿನಲ್ಲಿ, ಯೆಹೋಶುವ ಮತ್ತು ಕಾಲೇಬ್ ಇವರಿಬ್ಬರೇ ದೇವರ ವಾಗ್ದಾನವನ್ನು ನಂಬಿದರು, ಹೀಗಾಗಿ ಅವರು ಮಾತ್ರವೇ ವಾಗ್ದಾನ ಮಾಡಲ್ಪಟ್ಟ ದೇಶವನ್ನು ಸೇರಿದರು. ಅದೇ ನಂಬಿಕೆಯು ನಮ್ಮಲ್ಲಿಯೂ ತುಂಬಿರಲಿ ಹಾಗೂ ಹೊಸ ವರ್ಷದಲ್ಲಿ ವಾಗ್ದಾನ ಮಾಡಲ್ಪಟ್ಟ ಜಯದ ನಾಡಿನಲ್ಲಿ ನಿರಂತರವಾಗಿ ನಾವು ಬಾಳುವಂತಾಗಲಿ.
ನಾವು ನಿಮ್ಮೆಲ್ಲರಿಗೂ ಆಶೀರ್ವಾದದಿಂದ ತುಂಬಿ ತುಳುಕುವಂಥ - ಹೆಚ್ಚಿನ ಮುರಿಯುವಿಕೆಯೂ ಮತ್ತು ದೇವರಲ್ಲಿ ಹೆಚ್ಚಿನ ನಂಬಿಕೆಯೂ ಇರುವಂಥ - ಹೊಸ ವರ್ಷವನ್ನು ಹಾರೈಸುವೆವು.
|