English shape=
      

ವಾರದ ಸಂದೇಶ - Word For The Week

"ವಾರದ ಸಂದೇಶ" ವು ಪ್ರತೀ ವಾರ ಕಳುಹಿಸಲ್ಪಡುವ ಪತ್ರಿಕೆಯಾಗಿದೆ. ಪ್ರತೀ ಸಂಚಿಕೆಯು ಝ್ಯಾಕ್ ಪೂನನ್ ರವರ ಲೇಖನ, ಪುಸ್ತಕ ಅಥವಾ ಪ್ರಬೋಧನೆಗಳಿಂದ ಆಯ್ದ ಭಾಗವಾಗಿರುತ್ತದೆ.
2011 |  2012 |  2013
ನಮ್ಮ ಸೋಲುಗಳು ಕೂಡ ನಮಗೆ ಆತ್ಮಿಕ ಶಿಕ್ಷಣವನ್ನು ಕೊಡಬಲ್ಲವು
ಸೆಪ್ಟೆಂಬರ್ 2011 (2) - ಝ್ಯಾಕ್ ಪೂನನ್

ಶಿಷ್ಯನಾದ ಪೇತ್ರನು ಕರ್ತನನ್ನು ಅವಿವೇಕದಿಂದ ಮೂರು ಬಾರಿ ಅಲ್ಲಗಳೆಯುವ ಪಾಪಕ್ಕೆ ಸಿಲುಕಿದ ನಂತರವೇ ಕರುಣಾಭರಿತ ಅಪೋಸ್ತಲನ ಮಟ್ಟವನ್ನು ತಲುಪಿದನು. ಈ ಪಾಪಕ್ಕೆ ಪೇತ್ರನು ಸಿಲುಕುವುದು ಖಂಡಿತವಾಗಿ ದೇವರ ಪರಿಪೂರ್ಣ ಚಿತ್ತವೇನೋ ಆಗಿರಲಿಲ್ಲ.ಆದರೂ ಇದನ್ನು ದೇವರು ಸಮ್ಮತಿಸಿದ್ದು ಪೇತ್ರನಲ್ಲಿ ಏನೋ ಕಾರ್ಯ ಸಾಧನೆಗಾಗಿಯೇ ಎಂದು ನಾವು ನೋಡುತ್ತೇವೆ. ತಮ್ಮ ಜೀವನದಲ್ಲಿ ಸೋಲನ್ನು ಅನುಭವಿಸಿದವರನ್ನು ಅನುಕಂಪವುಳ್ಳ ಕೋಮಲ ಹೃದಯದಿಂದ ನೋಡುವಂತೆ ಆತನನ್ನು ಈ ಅನುಭವವು ಬದಲಾಯಿಸಿತು.

ಯೇಸುವು ಯಾವ ಪಾಪವನ್ನೂ ಮಾಡಿರದಿದ್ದರೂ, ಪಾಪಿಗಳನ್ನು ಅಪಾರ ಅನುಕಂಪ ಮತ್ತು ಕರುಣೆಯಿಂದ ಕಂಡರು. ಆದರೆ ಆದಾಮನ ಜನಾಂಗದ ಇತರರಲ್ಲಿ ಇದು ಹೀಗಲ್ಲ. ಘೋರ(ಬಹಳ)ವಾಗಿ ಪಾಪವನ್ನು ಮಾಡದವರು ಸಾಮಾನ್ಯವಾಗಿ ಪಾಪಿಗಳ ಕಡೆ ನಿಷ್ಕಾರುಣ್ಯ ಹಾಗೂ ಗರ್ವಭರಿತರಾಗಿರುತ್ತಾರೆ.

ಪೇತ್ರನು ಪಾಪಕ್ಕೆ ಬಿದ್ದ ಸನ್ನಿವೇಷಗಳನ್ನು ನಾವು ನೋಡುವಾಗ, ದೇವರು ಅವನು ಕರ್ತನನ್ನು ಅಲ್ಲಗಳೆಯುವ ಶೋಧನೆಯಿಂದ ಸುಲಭವಾಗಿ ತಪ್ಪಿಸಬಹುದಾಗಿತ್ತು ಎಂಬುದನ್ನು ನಾವು ನೋಡುತ್ತೇವೆ. ಆದಾಗ್ಯೂ ಆ ಶೋಧನೆಗಳ ಘಳಿಗೆಗಳಿಂದ ಅವನನ್ನು ಕಾಪಾಡಬಾರದೆಂದು ದೇವರು ನಿಶ್ಚಯಿಸಿದರು.

ಮಹಾ ಯಾಜಕನ ಆಸ್ಥಾನಕ್ಕೆ ಯೋಹಾನ ಮತ್ತು ಪೇತ್ರ ಯೇಸುವನ್ನು ಹಿಂಬಾಲಿಸಿದುದನ್ನು ನಾವು ಯೋಹಾನನು 18:15-18 ರಲ್ಲಿ ನಾವು ಕಾಣುತ್ತೇವೆ. ಯೋಹಾನನಿಗೆ ಮಹಾ ಯಾಜಕನ ಪರಿಚಯವಿದ್ದುದರಿಂದ, ದ್ವಾರಪಾಲಕನು ಅವನು ಒಳಹೋಗಲು ಅನುಮತಿಸಿದನು. ಆದರೆ ಪೇತ್ರನು ಒಳಹೋಗಲಾಗಲಿಲ್ಲ. ಯೋಹಾನನು ದ್ವಾರಪಾಲಕನ ಹತ್ತಿರ ಮಾತನಾಡಿದುದರಿಂದ, ಪೇತ್ರನೂ ಒಳಹೋಗಲು ಅನುಮತಿ ದೊರಕಿತು. ಆ ಕ್ಷಣದಲ್ಲಿ ಅದೊಂದು ಒಳ್ಳೆಯ ವಿಷಯದಂತೆ ಕಂಡಿತು. ಯೋಹಾನನು ಪೇತ್ರನನ್ನು ಅಂಗಳದೊಳಗೆ ಕರೆದುಕೊಂಡುಹೋಗಿರದಿದ್ದರೆ, ಪೇತ್ರನು ಆ ರಾತ್ರಿ ಪಾಪ ಮಾಡುತ್ತಿರಲಿಲ್ಲ. ಯಾಕೆಂದರೆ, ಅಂಗಳದ ಒಳಗೆಯೇ, ಪೇತ್ರನು ಪ್ರಶ್ನಿಸಲ್ಪಟ್ಟನು ಮತ್ತು ಕರ್ತನನ್ನು ಮೂರು ಬಾರಿ ನಿರಾಕರಿಸಿದನು (ಯೋಹಾನನು 18:17,25,27 ನೋಡಿ).

ನಾವೊಂದು ಪ್ರಶ್ನೆಯನ್ನು ಕೇಳಬಹುದು, "ದೇವರು ಅದನ್ನು ಯಾಕೆ ಸಂಭವಿಸಲು ಬಿಟ್ಟರು? ಅವರು ಯಾಕೆ ಅವನು ಅಂಗಳದೊಳಗೆ ಪ್ರವೇಶಿಸುವುದನ್ನು ತಡೆಯಲಿಲ್ಲ?" ಆದು ದೇವರ ಕಡೆಯಿಂದ ತಪ್ಪಾಗಿತ್ತೆ? ಇಲ್ಲ. ಪೇತ್ರನು ತನ್ನ ಸೋಲಿನ ಮೂಲಕ ಶಿಕ್ಷಣವನ್ನು ಪಡೆಯುವಂತೆ, ಯೋಹಾನನು ಪೇತ್ರನನ್ನು ಒಳಗೆ ತರುವಂತೆ ದೇವರು ತನ್ನ ಸಾರ್ವಭೌಮತ್ವದಲ್ಲಿ ಅನುಮತಿಸಿದರು. ತನ್ನ ಶಿಕ್ಷಣದ ಈ ಕೋರ್ಸನ್ನು ಅವನು ಮುಗಿಸದೆ, ಅವನು ಅಪೋಸ್ತಲರ ನಾಯಕ ಹಾಗೂ ಆರಂಭದ ಸಭೆಯ ಪ್ರಮುಖ ಸುಸಂದೇಶಕಾರನಾಗಿರಲು ಸಾಧ್ಯವಾಗುತ್ತಿರಲಿಲ್ಲ.

ಪೇತ್ರನನ್ನು ಶೋಧಿಸಲು ಸೈತಾನನು ತನ್ನ ಪ್ರತಿನಿಧಿಗಳನ್ನು ತಯಾರಾಗಿರಿಸಿದ್ದನು. ಆದರೆ, ಅದನ್ನು ಮಾಡಲು ಅವನು ದೇವರ ಅನುಮತಿಯನ್ನು ಪಡೆಯಬೇಕಾಗಿತ್ತು. ಆದರೆ ಪೇತ್ರನು ತನ್ನ ತೀಕ್ಷ್ಣ ಸೋಲಿನ ಸಮಯದಲ್ಲಿ ತನ್ನ ವಿಶ್ವಾಸದಲ್ಲಿ ಸೋಲದಂತೆ ಯೇಸುವು ಅವನಿಗಾಗಿ ಪ್ರಾರ್ಥಿಸುತ್ತಿದ್ದರು (ಲೂಕ 22:31,32). ಮತ್ತು ಯೇಸುವಿನ ಪ್ರಾರ್ಥನೆಯು ಉತ್ತರಿಸಲ್ಪಟ್ಟಿತು. ಕರುಣಾಭರಿತನಾಗಿ ಹಾಗೂ ಮುರಿದವನಾಗಿ, ಪೇತ್ರನು ಆ ಅನುಭವದಿಂದ ಹೊರಬಂದನು. ಎಂದಿಗೂ ಪಾಪಿಗಳನ್ನು ಕಠಿಣತೆಯಿಂದ ಖಂಡಿಸುವುದು ಅವನಿಗೆ ಸಾಧ್ಯವಾಗದು. ಪ್ರತೀ ಸಲ ಆ ರೀತಿ ನಡೆಯಲು ಅವನು ಶೋಧಿಸಲ್ಪಟ್ಟಾಗ ಅವನಿಗೆ ಅವನ ಸೋಲೇ ನೆನಪಿಗೆ ಬಂದು ಅವನು ತನ್ನ ಖಂಡನೆಯ ತೀಕ್ಷ್ಣತೆಯನ್ನು ಕಡಿಮೆಗೊಳಿಸುವನು.

ನಿನಗೆ ನಂಬಿಕೆಯಿದ್ದರೆ, ನಿನ್ನ ಜೀವನದಲ್ಲಿ ಸಂಭವಿಸಿದ ಅತೀ ಕೆಟ್ಟ ವಿಷಯಗಳನ್ನು ದೇವರು ನಿನ್ನ ಅತ್ಯುತ್ತಮಕ್ಕಾಗಿ ಕೆಲಸ ಮಾಡುವಂತೆ ಮಾಡುವರು. ಆ ದುರದೃಷ್ಟದ ದಿನ ತಾನು ಕರ್ತನನ್ನು ನಿರಾಕರಿಸದಂತೆ, ಯೋಹಾನನು ಅಂಗಳವನ್ನು ಪ್ರವೇಶಿಸಲು ಅನುಮತಿ ಪಡೆಯದಿದ್ದರೆ ಚೆನ್ನಾಗಿತ್ತು ಎಂದು ಪೇತ್ರನು ಪಂಚಾಶತ್ತಮದ ಮೊದಲಿನ ಏಳು ವಾರಗಳ ಕಾಲ ಪೇತ್ರನು ಆಶಿಸಿದ್ದಿರಬಹುದು. ಆದರೆ, ಆಗ ಅವನು ಮುರಿಯಲ್ಪಡುತ್ತಿರಲಿಲ್ಲ ಕೂಡ ಮತ್ತು ಅವನು ಪಂಚಾಶತ್ತಮದ ದಿನ ಪಾಪಿಗಳಿಗೆ ಸುಸಂದೇಶವನ್ನು ಸಾರಲು ಅಯೋಗ್ಯನಾಗುತ್ತಿದ್ದನು.

ಪೇತ್ರನು ಪಾಪದ ವಿರುದ್ಧ ಮತ್ತೂ ಬೋಧಿಸಿದನೆಂದು ನಮಗೆ ತಿಳಿದಿದೆ, ಯಾಕೆಂದರೆ, ಅವನು ತನ್ನ ಪತ್ರಿಕೆಯಲ್ಲಿ ಪಾಪ ಮಾಡದ ಯೇಸುವಿನ ಹೆಜ್ಜೆಗಳಲ್ಲಿ ಹಿಂಬಾಲಿಸುವುದರ ಬಗ್ಗೆ ಮತ್ತು ಪಾಪದಿಂದ ಬಿಡುಗಡೆ ಹೊಂದುವ ಬಗ್ಗೆ ಬರೆಯುತ್ತಾನೆ (1 ಪೇತ್ರನು 2:2,22; 4:1,2). ಆದರೆ ಈಗ ಅವನು ಕರುಣಾಭರಿತನಾಗಿ ಬೋಧಿಸಿದನು. ಅದಕ್ಕಾಗಿಯೇ, ಪಂಚಾಶತ್ತಮದ ದಿನ ಸುಸಂದೇಶದ ಬಾಗಿಲನ್ನು ಯೆಹೂದ್ಯರಿಗೆ ಮತ್ತು ಕೊರ್ನೇಲಿಯನ ಮನೆಯಲ್ಲಿ ಅನ್ಯ ಧರ್ಮೀಯರಿಗೆ ಸುಸಂದೇಶದ ಬಾಗಿಲನ್ನು ತೆರೆಯುವ ಭಾಗ್ಯವು ಅವನಿಗೆ ಕೊಡಲ್ಪಟ್ಟಿತು. ದೇವರು ಯಾಕೋಬ ಅಥವಾ, ಯೋಹಾನನ್ನು ಈ ಸಂದರ್ಭಗಳಲ್ಲಿ ಉಪಯೋಗಿಸಬಹುದಾಗಿತ್ತು. ಆದರೆ ಅವರು ಆ ರೀತಿ ಮಾಡಲಿಲ್ಲ. ಅವರು ಪೇತ್ರನನ್ನು ಉಪಯೋಗಿಸಿದರು.

ದಾವೀದನು ಪೇತ್ರನಂತೆ ಮತ್ತೊಬ್ಬನಾಗಿದ್ದನು. ಒಮ್ಮೆ ಆಲಸ್ಯದಿಂದ ರಣರಂಗಕ್ಕೆ ಹೋಗುವುದನ್ನು ತಪ್ಪಿಸಿದಾಗ, ಅವನು ಬಹಳ ಕೆಟ್ಟದಾಗಿ ಪಾಪದಲ್ಲಿ ಬಿದ್ದನು - ತನ್ನ ವಿರುದ್ಧ ತನ್ನ ಜೀವನದಲ್ಲಿ ಮತ್ತು ಶತಮಾನಗಳಿಗೆ ತನ್ನ ವಿರುದ್ಧ ಅದೊಂದು ಕಪ್ಪು ಚುಕ್ಕೆಯಾಯಿತು( 2 ಸಮು.11:1-5). ಪವಿತ್ರ ಆತ್ಮವು ಈ ರೀತಿ ದಾಖಲಿಸುತ್ತದೆ. "ದಾವೀದನು, ಹಿತ್ತೀಯನಾದ ಉರೀಯನ ವಿಷಯದ ಹೊರತಾಗಿ, ತನ್ನ ಜೀವಿತದ ಸಮಸ್ತ ದಿವಸಗಳಲ್ಲಿ ಕರ್ತನು ತನಗೆ ಆಜ್ಞಾಪಿಸಿದಂತೆ ನಡೆದು, ಆತನ ದೃಷ್ಟಿಗೆ ಮೆಚ್ಚಿಗೆಯಾದದನ್ನು ಮಾಡಿದನು" (1 ಅರಸು. 15:5). ಆದಾಗ್ಯೂ ಅವನ ಸೋಲನ್ನು ದೇವರು ಅವನನ್ನು ಮುರಿಯಲು ಹಾಗೂ ಅವನು ಕೀರ್ತನೆ 51 ನ್ನು ಬರೆಯುವಂತೆ ಮಾಡಲು ಉಪಯೋಗಿಸಿದರು, ಲಕ್ಷಾಂತರ ಜನರು ಅನೇಕ ಶತಮಾನಗಳಲ್ಲಿ ದಾವೀದನ ಇತರ ಬರಹಗಳಿಗಿಂತ ದೇವಪ್ರೇರಿತವಾದ ಈ ಕೀರ್ತನೆಯಿಂದ ಆಶೀರ್ವಾದಿಸಲ್ಪಟ್ಟಿದ್ದಾರೆ. ತಾನು ಸಾಧಾರಣ ಪಾಪವನ್ನು ಮಾಡಿದ್ದರೆ, ಅವನು ಆ ಕೀರ್ತನೆಯನ್ನು ಬರೆಯಲಾಗುತ್ತಿರಲಿಲ್ಲ. ಅವನು ದೀನ ಹಾಗೂ ಮುರಿದವನಾಗಲು, ಅವನ ಸೋಲು ದೊಡ್ಡದು, ಆಳವಾದದ್ದು ಹಾಗೂ ಸಾರ್ವಜನಿಕವಾಗಿ ತಿಳಿದುದಾಗಬೇಕಿತ್ತು. ತನ್ನ ಉಳಿದ ಜೀವಮಾನವೆಲ್ಲಾ ಅವನು ಮುರಿದ ಮನುಷ್ಯನಾಗಿದ್ದನು. ಮತ್ತು ಯೇಸುವು ತನ್ನನ್ನೇ ದಾವೀದನ ಪುತ್ರನೆಂದು ಕರೆಯುತ್ತಾನೆ.

ಅನುವಾದಾ : ಜಾನ್     ಈ ಪುಟವನ್ನು ಮುದ್ರಿಸಿಕೊಳ್ಳಿ   ಈ ಪುಟವನ್ನು ಕಳುಹಿಸಿ

"ವಾರದ ಸಂದೇಶ!" - ನಿಮ್ಮ ಯಾವುದೇ ಅನಿಸಿಕೆ ಅಥವಾ ಪ್ರಶೆಗಳಿದ್ದಲ್ಲಿ ದಯವಿಟ್ಟು ನಮಗೆ ಬರೆಯಿರಿ :
kannada@cfcindia.com, cfc@cfcindia.com
ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ | ವಾರದ ಸಂದೇಶ | ದೈವ ಸಂದೇಶಗಳು | ಆಡಿಯೋ| ವಿಡಿಯೋ | ಸಂಪರ್ಕಿಸಿರಿ

© Copyright - Christian Fellowship Church , Bangalore. (INDIA)