|
ಹೊಸ ಒಡಂಬಡಿಕೆಯಲ್ಲಿ, ನಾವು ಪಾಪದ ಮೇಲೆ ಜಯಿಸಿ ಜೀವಿಸಿದರೂ ಕೂಡ, ಏಕಾಂಗಿಯಾಗಿ ನಮ್ಮಷ್ಟಕ್ಕೇ ಜೀವಿಸುವುದು ದೇವರ ಉದ್ದೇಶವಲ್ಲ. ಒಟ್ಟಾಗಿ ಯೇಸುವಿನ ಮಹಿಮೆಯನ್ನು ಬಿಂಬಿಸುವ ಯೇಸುವಿನ ಶಿಷ್ಯರನ್ನು ಹೊಂದಿದ ದೇಹವಿರಬೇಕೆಂಬುದು ದೇವರ ಇಚ್ಛೆಯಾಗಿದೆ.
ದೇಹ ಮತ್ತು ಜನಸಮೂಹದ ಮಧ್ಯೆ ವ್ಯತ್ಯಾಸವಿದೆ. ಜನಸಮೂಹವು, ಒಂದು ಪ್ರಾಪಂಚಿಕ ಜನಸಂಘಕ್ಕೆ ಸಮಾನವಾದದು. ಜನಸಂಘವು, ಜನರು ಒಬ್ಬರಿಗೊಬ್ಬರು ಸಹಾಯ ಮಾಡುವ, ಪರಸ್ಪರ ಕಾಳಜಿಯಿರುವ ಸಂಸ್ಥೆಯಾಗಿರುತ್ತದೆ. ಆದರೆ ದೇಹವು ಅದಕ್ಕಿಂತ ಹೆಚ್ಚಿನದು. ಕ್ರಿಸ್ತನ ದೇಹದಲ್ಲಿ ಪ್ರತಿಯೊಬ್ಬ ಸದಸ್ಯನು ಪ್ರಪ್ರಥಮವಾಗಿ ಶಿರಸ್ಸಿಗೆ(ಕ್ರಿಸ್ತನಿಗೆ) ಆಂತರಿಕವಾದ ಸಂಬಂಧ ಹೊಂದಿದವನಾಗಿರುತ್ತಾನೆ ಮತ್ತು ಪ್ರತ್ಯೇಕಿಸಲಾಗದ ರೀತಿಯಲ್ಲಿ ಇತರ ಸದಸ್ಯರೊಂದಿಗೆ ಸಂಬಂಧ ಹೊಂದಿದವನಾಗಿರುತ್ತಾನೆ. ತಂದೆ ಮತ್ತು ಮಗನು ಐಕ್ಯರಾಗಿರುವಂತೆ, ಈ ಸದಸ್ಯರೂ ಕೂಡ ಐಕ್ಯತೆಯಲ್ಲಿ ಬೆಳೆಯಬೇಕು (ಯೋಹಾ. 17:21-23).
ಅಂತಹ ದೇಹವನ್ನು ಜಗತ್ತಿನಲ್ಲಿ ಎಲ್ಲಿಯೂ ಕಟ್ಟುವುದನ್ನು ಸೈತಾನನು ವಿರೋಧಿಸುತ್ತಾನೆ. ಯಾಕೆಂದರೆ, ಅಂತಹ ದೇಹವು ಅವನನ್ನು ಸದೆಬಡಿಯಬಹುದು, ಹೊಡೆದೋಡಿಸಬಹುದು ಮತ್ತು ಅವನ ರಾಜ್ಯವನ್ನು ನಾಶಪಡಿಸುವುದೆಂದು ಅವನಿಗೆ ಚೆನ್ನಾಗಿ ತಿಳಿದಿದೆ. ಪಾತಾಳ ಲೋಕದ ಬಲವು ಸಭೆಯ ವಿರುದ್ಧ ಜಯಶಾಲಿಗಳಾಗಲಾರವು ಎಂದು ಯೇಸು ಹೇಳಿದ್ದಾನೆ (ಮತ್ತಾ. 16:18). ಪಾತಾಳ ಲೋಕದ ಬಲವು ಒಬ್ಬಂಟಿಗ ಕ್ರೈಸ್ತನ ವಿರುದ್ಧ ಜಯಶಾಲಿಯಾಗಬಹುದು. ಆದರೆ ಅದು ದೇಹದ ವಿರುದ್ಧ ಜಯಶಾಲಿಯಾಗಲಾರದು. ಅದಕ್ಕಾಗಿಯೇ ಪವಿತ್ರತೆಯ ಮೇಲೆ ಸೈತಾನನ ಧಾಳಿಗಿಂತ, ವಿಶ್ವಾಸಿಗಳ ಆತ್ಮಿಕ ಐಕ್ಯತೆಯ ಮೇಲೆ ಸೈತಾನನ ಧಾಳಿಯು ಪ್ರಬಲವಾದುದು. ಎಲ್ಲಿ ಯಾರೂ ಇಬ್ಬರು ಶಿಷ್ಯರು ಮನಸ್ಸು ಮತ್ತು ಆತ್ಮದ ಐಕ್ಯತೆಯಲ್ಲಿ ದೃಢವಾಗಿದ್ದಾರೋ, ಅವರು ಕೇಳಿದ್ದೆಲ್ಲವೂ ಕೊಡಲ್ಪಡುವುದು. ಯಾಕೆಂದರೆ, ಅಂತಹ ಇಬ್ಬರು ಶಿಷ್ಯರಲ್ಲಿ ಕ್ರಿಸ್ತನ ದೇಹವು ವ್ಯಕ್ತವಾಗುತ್ತದೆ (ಮತ್ತಾಯನು 18:18-20).
ನಾವು ಏಕಾಂಗಿಯಾಗಿ ಜೀವಿಸಿ ಕಂಡುಕೊಳ್ಳುವುದಕ್ಕಿಂತ, ಇತರ ವಿಶ್ವಾಸಿಗಳ ಅನ್ಯೋನ್ಯತೆಯಲ್ಲಿ ಜೀವಿಸುವದರಿಂದ ನಮ್ಮ ಶರೀರದ ಸ್ವಾರ್ಥ ಹಾಗೂ ಕಡು ಭ್ರಷ್ಟಾಚಾರವನ್ನು ಅತಿ ಶೀಘ್ರವಾಗಿ ಹಾಗೂ ಆಳವಾಗಿ ಕಂಡುಕೊಳ್ಳುವೆವು. ನಮ್ಮಂತಿರುವ ಇತರ ವಿಶ್ವಾಸಿಗಳ ಜೊತೆಗಿನ ಅನ್ಯೋನ್ಯತೆಯಿಂದ ಮಾತ್ರ ನಮ್ಮ ಒರಟುತನವು (ಒರಟು ಬದಿಗಳು) ನಯವಾಗಲು ಸಾಧ್ಯವಾಗುವುದು.
ಅನೇಕ ವಿಶ್ವಾಸಿಗಳು ಸಭೆ ಮತ್ತು ಕ್ರಿಸ್ತನ ದೇಹದ ಬಗ್ಗೆ ಅನೇಕ ಒಣಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾರೆ. ಆದರೆ ನಾವು ವಾಸ್ತವಿಕತೆಯನ್ನು ಹುಡುಕುವವರ ಮಧ್ಯೆ ಇರಬೇಕು. ಕ್ರೈಸ್ತ ಸಮಾಜದಲ್ಲಿ ಸಾಕಷ್ಟು ಸಿದ್ಧಾಂತಗಳಿವೆ. ಸಭೆಯ ಬಗ್ಗೆ, ಕ್ರೈಸ್ತ ಸಮಾಜದಲ್ಲಿ ಸಾಕಷ್ಟು ಸಿದ್ಧಾಂತಗಳಿವೆ. ಆ ಸಂಖ್ಯೆಗೆ ಕ್ರಿಸ್ತನ ದೇಹದ ಅಥವಾ ಸಭೆಯ ಬಗ್ಗೆ ಇನ್ನೊಂದು ಸಿದ್ಧಾಂತವನ್ನು ನಾವು ಸೇರಿಸಬೇಕಾಗಿಲ್ಲ. ನಮ್ಮ ಸ್ಥಳೀಯ ಸಭೆಯಲ್ಲಿ ನಮ್ಮ ಪರಸ್ಪರ ಸಂಬಂಧದ ಮೂಲಕ ಕ್ರಿಸ್ತನ ದೇಹದ ವಾಸ್ತವಿಕತೆಯನ್ನು ತೋರ್ಪಡಿಸೋಣ ಹೀಗೆ ಕ್ರಿಸ್ತನ ದೇಹವು ಸತ್ಯ(ವಾಸ್ತವಿಕ)ವೆಂದು ಸೈತಾನನಿಗೆ ಮತ್ತು ಈ ಲೋಕಕ್ಕೆ ತೋರ್ಪಡಿಸೋಣ.
|