English shape=
      

ವಾರದ ಸಂದೇಶ - Word For The Week

"ವಾರದ ಸಂದೇಶ" ವು ಪ್ರತೀ ವಾರ ಕಳುಹಿಸಲ್ಪಡುವ ಪತ್ರಿಕೆಯಾಗಿದೆ. ಪ್ರತೀ ಸಂಚಿಕೆಯು ಝ್ಯಾಕ್ ಪೂನನ್ ರವರ ಲೇಖನ, ಪುಸ್ತಕ ಅಥವಾ ಪ್ರಬೋಧನೆಗಳಿಂದ ಆಯ್ದ ಭಾಗವಾಗಿರುತ್ತದೆ.
2011 |  2012 |  2013
ಕರ್ತನೊಂದಿಗೆ ಆಪ್ತ ಸಂಬಂಧವನ್ನಿಟ್ಟುಕೊಳ್ಳುವದು
ಫೆಬ್ರುವರಿ 2011 (1) - ಝ್ಯಾಕ್ ಪೂನನ್

ರಮಗೀತ 4:12 ರಲ್ಲಿ, ಮದಲಿಂಗನು ಮದಲಗಿತ್ತಿಯನ್ನು "ಒಂದು ಅಗುಳಿ ಹಾಕಿದ ಉದ್ಯಾನ" - ಅಂದರೆ, ತನಗಾಗಿ ಮಾತ್ರವೇ ಇರಿಸಿದ ಉದ್ಯಾನ ಎಂದು ಕರೆಯುವನು. ಆಕೆಯು ತನ್ನ ಕರ್ತನಿಗೇ ಸೇರಿದವಳು, ಬೇರೆ ಯಾರಿಗೂ ದೊರಕದವಳು. ಆಕೆಯು ಇನ್ನೆಲ್ಲರನ್ನು ಹೊರತಾಗಿಸಿ ತನ್ನ ಕರ್ತನನ್ನೇ ಸೇರುವಳು.

ಕರ್ತನ ಮತ್ತು ನಿನ್ನ ನಡುವಿನ ಸಂಬಂಧವು ಹೀಗಿದೆಯೋ? ಯೇಸು ಕ್ರಿಸ್ತನು "ನೀನು ನನ್ನ ಖಾಸಗಿ ಉದ್ಯಾನ, ಅಲ್ಲಿ ಇನ್ಯಾರೂ ಇಲ್ಲ" ಎಂದು ನಿನ್ನ ವಿಷಯವಾಗಿ ಹೇಳಬಹುದೇ? ಜಗತ್ತಿನಲ್ಲಿ ಅವಶ್ಯಕತೆಗೆ ಮೀರಿ ಧನ ಗಳಿಸುವ ಅವಕಾಶಗಳು, ಸ್ವಂತಕ್ಕಾಗಿ ಲೌಕಿಕ ಪ್ರಭಾವ, ಪ್ರಖ್ಯಾತಿ ಮತ್ತು ಒಳ್ಳೆಯ ಹೆಸರನ್ನು ಗಳಿಸುವ ಅವಕಾಶಗಳು ನಮ್ಮನ್ನು ಸೆಳೆಯಬಹುದು. ನಾವು ಇಂಥಹ ಶೋಧನೆಗಳನ್ನು, - ವದುವನ್ನು ತಪ್ಪುದಾರಿಗೆ ಎಳೆಯಲು ಇತರ ಪುರುಷರು ಮಾಡುವ ಪ್ರಯತ್ನಗಳಿಗೆ ಹೋಲಿಸಬಹುದು. ಇವುಗಳಿಂದ ಈ ವಧುವು ಸೆಳೆಯಲ್ಪಡಲಾರಳು. ಆಕೆಯು ತನ್ನ ಮದಲಿಂಗನಿಗೆ ಮಾತ್ರವೇ ಮೀಸಲಿರುವಂಥವಳು. ಆಕೆಯ ಮನದಾಸೆಗಳೂ ಆತನವೇ.

ಕ್ರಿಸ್ತನೊಂದಿಗೆ ಅಂಥಹ ಸಂಬಂಧದಲ್ಲಿ ಜೀವಿಸುವ ವಿಶ್ವಾಸಿಗಳು ಅತೀ ಕಡಿಮೆ. ಇದೇ ಕಾರಣದಿಂದಾಗಿ ಅವರು ಆತನನ್ನು ನಿಕಟವಾಗಿ ತಿಳಿದುಕೊಳ್ಳದೇ ಇರುವದೂ ಮತ್ತು ಆತನ ವಾಕ್ಯವನ್ನು ಅರಿಯದಿರುವುದೂ ಆಗಿದೆ.

ಸತ್ಯವೇದವನ್ನು ಅರಿತುಕೊಳ್ಳುವುದರ ಮೂಲ ರಹಸ್ಯ - "ಕರ್ತನ ಜೋತೆ ಮೊದಲು ನಾವು ನಿಕಟ ಸಂಬಂಧದಲ್ಲಿರುವುದು". ತನ್ನ ವಾಕ್ಯವಾದ ಸತ್ಯವೇದವನ್ನು ಬಿಡಿಸಿ ಹೇಳಲು ಆತನಿಗಿಂತ ಇನ್ಯಾರು ಉತ್ತಮರು? ಆದಿ ಶಿಷ್ಯರಂತೆ ನೀವೂ ಆತನೊಂದಿಗೆ ನಡೆದು, ಆತನು ನಿಮ್ಮೊಡನೆ ಆಡುವ ನುಡಿಯನ್ನು ತವಕದಿಂದ ಆಲಿಸಿರಿ. ಆಗ ಅವರಿಗಾದಂತೆಯೇ ನಿಮ್ಮ ಕಣ್ಣುಗಳೂ ತೆರೆಯಲ್ಪಟ್ಟು, ನಿಮ್ಮ ಹೃದಯಗಳೂ ಕುದಿಯುವವು. ಕಳೆದ ೪೦ಕ್ಕೂ ಹೆಚ್ಚಿನ ವರ್ಷಗಳು ಕರ್ತನಾದ ದೇವರೊಂದಿಗೆ ನಡೆದು ನಾನು ಕಂಡುಕೊಂಡಿರುವದು ಇದನ್ನೇ.

ಇದಾದ ನಂತರ ವದುವು ತನ್ನ ತೋಟಕ್ಕೆ ಬಡಗಣ ಗಾಳಿಯನ್ನೂ, ತೆಂಕಣ ಗಾಳಿಯನ್ನೂ ಆಹ್ವಾನಿಸುತ್ತಾಳೆ(ಪರಮಗೀತೆ 4:6). ಬಡಗಣ ಗಾಳಿಯು ಸಂಕಷ್ಟ, ಆಪತ್ತು ಮತ್ತು ಶೋಧನೆಗಳ ಶೀತ ಗಾಳಿಯಾಗಿದ್ದು, ತೆಂಕಣ ಗಾಳಿಯು ಆಶೀರ್ವಾದ, ಉತ್ತೇಜನ, ಅಭಿವೃದ್ಧಿ ಹಾಗೂ ಸಂತಸದ ಗಾಳಿಯಾಗಿದೆ. ಎಂಥಹ ಗಾಳಿಯಾದರೂ ಬೀಸಲಿ ಫಲಿತಾಂಶವು ಮಾತ್ರ ಒಂದೇ. "ಸುತ್ತಲೂ ಹರಡಿರುವ ಒಂದು ಸುಗಂಧ." ಆರಾಮದಾಯಕ ಸುಗಮ ಬಾಳುವೆಯೇ ಇರಲಿ, ಅಥವಾ ಬವಣೆ ಮತ್ತು ಅಡಚಣೆಗಳೇ ತುಂಬಿರಲಿ, ದೇವರ ಕೃಪೆಯು ನಮ್ಮಿಂದ ಕ್ರಿಸ್ತನ ಸುವಾಸನೆ ಹೊಮ್ಮುವಂತೆ ಮಾಡಬಲ್ಲದು. ಸನ್ನಿವೇಶಗಳು ಹೇಗಿದ್ದರೂ ಸರಿ, ನಮ್ಮ ಜೀವಿತದಿಂದ ದೇವರಿಗೆ ಕೃತಜ್ಞತಾ ಸ್ತುತಿ, ಸ್ತೋತ್ರ ಮತ್ತು ಆರಾಧನೆಗಳು ಹೊರಚಿಮ್ಮುವವು.

"ಎನ್ನಿನಿಯನು ತನ್ನ ತೋಟದದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ಭುಜಿಸಲಿ" (ಪರಮಗೀತೆ 4:16). ನಮ್ಮ ಜೀವನದಲ್ಲಿ(ನಮ್ಮ ತೋಟದಲ್ಲಿ) ಉತ್ಪನ್ನವಾಗಿರುವ ಸರ್ವಸ್ವವೂ ಕರ್ತನಾದ ದೇವರಿಗಾಗಿಯೇ - ಇತರರು ನಮ್ಮ ಆತ್ಮಿಕತೆಯನ್ನು ಮೆಚ್ಚಿ ತಲೆದೂಗುವುದು ಬೇಕಿಲ್ಲ. ಬದಲಾಗಿ ಅವರು ನಿಮ್ಮ ಅದ್ಭುತವಾದ ರಕ್ಷಕನನ್ನು ಕಂಡು ಮೆಚ್ಚಲಿ! ಹೀಗಾಗದೇ ಇದ್ದಲ್ಲಿ ನಿಮ್ಮ ತೋಟದ ಫಲವು ಮಾನವನಿಗೆ ಸಲ್ಲುವುದೇ ಹೊರತು ಕರ್ತನಿಗಲ್ಲ. ಮದಲಗಿತ್ತಿಯು ಹೇಳಿದಂತೆ ’ನನ್ನ ಉದ್ಯಾನದ ಸಕಲವೂ ನನ್ನ ನಲ್ಲನಿಗೆ ಮಾತ್ರವೇ’.

ಯಾರನ್ನಾದರೂ ಕ್ರಿಸ್ತನ ಬಳಿಗೆ ನಡೆಸಲು ದೇವರು ನಿನ್ನನ್ನು ಬಳಸಿರುವರೇ? ಈ ನಿನ್ನ ಸಾಧನೆಗಾಗಿ ಹಿಗ್ಗದಿರು. ಆ ಪಾಪಿಯು ಪಶ್ಚಾತ್ತಾಪ ಪಟ್ಟಿರುವದಕ್ಕಾಗಿ ದೇವದೂತರೊಂದಿಗೆ ಸಂತೋಷಿಸು. ಆತನು ಕರ್ತನ ಪರಿವರ್ತಿತನು, ನಿನ್ನವನಲ್ಲ.

ಕರ್ತನಾದ ದೇವರಿಗಾಗಿ ನೀನು ತ್ಯಾಗ ಮಾಡಿರುವುದಾದರೆ, ಅದು ಇತರರಿಗೆ ತಿಳಿಯದಂತೆ ಇರಲಿ. ನಮ್ಮ ತ್ಯಾಗಗಳನ್ನು ನಾವೇ ಏಕೆ ಬಹಿರಂಗಪಡಿಸಬೇಕು? ಪತಿಯನ್ನು ಗಾಡವಾಗಿ ಪ್ರೀತಿಸುತ್ತಿರುವ ಪತ್ನಿಯು ತಾನು ಆತನಿಗಾಗಿ ಮಾಡುವ ತ್ಯಾಗಗಳನ್ನು ಜಗತ್ತಿಗೆ ಘೋಷಿಸುತ್ತಾಳೆಯೇ? ಪತಿ-ಪತ್ನಿಯರ ನಡುವಿನ ಪ್ರೀತಿಯ ಗುಟ್ಟು ಮಾತುಗಳು ಅನೇಕ ಇರುವವು. ನಮ್ಮ ಮತ್ತು ಕರ್ತನ ನಡುವೆಯೂ ಪ್ರೇಮಭರಿತ ರಹಸ್ಯಗಳು ಇರಬೇಕು. ನೀನು ಕರ್ತನಾದ ದೇವರೊಡನೆ ಏಕಾಂತದಲ್ಲಿ ಸಮಯ ಕಳೆಯುತ್ತಿರಬಹುದು. ಭೇಷ್. ಆದರೆ ಇತರರಿಗೆ ಈ ವಿಷಯ ಏಕೆ ಬೇಕು? ತನ್ನ ಪತಿಯನ್ನು ಪ್ರೀತಿಸುತ್ತಿರುವ ಪತ್ನಿಯು ತಮ್ಮಿಬ್ಬರ ನಡುವಿನ ಏಕಾಂತದ ಮಾತುಗಳನ್ನು ಬಹಿರಂಗಗೊಳಿಸುವುದಿಲ್ಲ. ಈ ಕಾರಣಕ್ಕಾಗಿಯೇ ನಾವು ಪ್ರಾರ್ಥಿಸುವಾಗ ಬಾಗಿಲನ್ನು ಮುಚ್ಚುವಂತೆ ಯೇಸುವು ತಿಳಿಸಿರುವುದು. ನಮ್ಮ ಇನಿಯನೊಡನೆ ನಾವು ಕಳೆಯುವ ಸಮಯದ ವಿಷಯ ಯಾರಿಗೂ ತಿಳಿಯಕೂಡದು.

ಆದರೆ ಇಂಥಹ ಕ್ರೈಸ್ತರು ಕಾಣಬರುವುದು ಅತೀ ವಿರಳ. ಬಹಳಷ್ಟು ಜನರು ಕರ್ತನಿಗಾಗಿ ಮಾಡಿರುವ ತಮ್ಮ ತ್ಯಾಗಗಳ, ಸೇವೆಯ ಬಗ್ಗೆ - ತಮ್ಮನ್ನೇ ಹೆಚ್ಚಳಪಡಿಸಿಕೊಳ್ಳುತ್ತಾ ಉತ್ಸುಕತೆಯಿಂದ ಎಲ್ಲರಿಗೂ ತಿಳಿಯಬಯಸುತ್ತಾರೆ! ಕರ್ತನೊಂದಿಗೆ ಅವರ ಕಳಪೆ ಸಂಬಂಧದ ಸ್ಪಷ್ಟ ಪುರಾವೆಯೇ ಇದು. ಪರಮಗೀತವು ಅಂತಹ ಎಲ್ಲಾ ಕ್ರೈಸ್ತರಿಗಾಗಿ ಇರುವ ಪ್ರಮುಖ ಪುಸ್ತಕ. ನಾನು ನನ್ನ ಕ್ರಿಸ್ತೀಯ ಜೀವನವನ್ನು ಪ್ರಾರಂಭಿಸುತ್ತಿದ್ದಾಗ ಕರ್ತನು ನನ್ನನ್ನು ಈ ಪುಸ್ತಕದ ಅಧ್ಯಯನಕ್ಕೆ ನಡೆಸಿದುದಕ್ಕಾಗಿ ನಾನು ಆತನಿಗೆ ಅತ್ಯಂತ ಆಭಾರಿಯಾಗಿದ್ದೇನೆ. ಕರ್ತನಾದ ದೇವರೊಂದಿಗಿನ ಈ ಪ್ರೇಮ-ಭಾಂದವ್ಯವೇ ನಾವು ಆತನಿಗಾಗಿ ಮಾಡುವ ಸೇವೆಗೆ ಮೂಲ ಕಾರಣವಾಗಿ ಇರಬೇಕು.

ಅನುವಾದಾ : ಜಾನ್     ಈ ಪುಟವನ್ನು ಮುದ್ರಿಸಿಕೊಳ್ಳಿ    ಈ ಪುಟವನ್ನು ಕಳುಹಿಸಿ

"ವಾರದ ಸಂದೇಶ!" - ನಿಮ್ಮ ಯಾವುದೇ ಅನಿಸಿಕೆ ಅಥವಾ ಪ್ರಶೆಗಳಿದ್ದಲ್ಲಿ ದಯವಿಟ್ಟು ನಮಗೆ ಬರೆಯಿರಿ :
kannada@cfcindia.com, cfc@cfcindia.com
ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ | ವಾರದ ಸಂದೇಶ | ದೈವ ಸಂದೇಶಗಳು | ಆಡಿಯೋ| ವಿಡಿಯೋ | ಸಂಪರ್ಕಿಸಿರಿ

© Copyright - Christian Fellowship Church , Bangalore. (INDIA)